ಮತಗಟ್ಟೆಯಲ್ಲಿ ಘರ್ಷಣೆ, ಇವಿಎಂ ನಾಶ: ಇಂಡಿಗನತ್ತದ 49 ಮಂದಿಗೆ ಜಾಮೀನು; ಗ್ರಾಮಸ್ಥರು, ಮಕ್ಕಳಲ್ಲಿ ಪೊಲೀಸರ ಭಯ ದಶಕಗಳಿಂದ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಇವಿಎಂಗಳನ್ನು ನಾಶಪಡಿಸಿದ ನಂತರ ಇಂಡಿಗನತ್ತ ಗ್ರಾಮವು ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಹನೂರಿನ ಇಂಡಿಗನತ್ತ ಗ್ರಾಮದ 49 ಜನರಿಗೆ ಜಾಮೀನು ಮಂಜೂರು ಮಾಡಿ ನಾಲ್ಕು ದಿನಗಳು ಕಳೆದರೂ, ಮಲೆ ಮಹದೇಶ್ವರ ಬೆಟ್ಟದ ಸಮೀಪದ ಕಾಡಿನಲ್ಲಿರುವ ಈ ಕುಗ್ರಾಮದಲ್ಲಿ ಇನ್ನೂ ಸಹಜತೆ ಮರಳಿಲ್ಲ. ಏಕೆಂದರೆ, ನಿವಾಸಿಗಳಲ್ಲಿ ಇಂದಿಗೂ ಪೊಲೀಸರ ಭಯ ಆವರಿಸಿದೆ.ದಶಕಗಳಿಂದ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಇವಿಎಂಗಳನ್ನು ನಾಶಪಡಿಸಿದ ನಂತರ ಇಂಡಿಗನತ್ತ ಗ್ರಾಮವು ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ಈ ಪ್ರಕರಣ ಸಂಬಂಧ ಅನೇಕರು ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರೂ, ಇತರ ಪ್ರಕರಣಗಳಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಪೊಲೀಸರು ಅವರನ್ನು ಯಾವುದೇ ಸಮಯದಲ್ಲಿ ಮತ್ತೆ ಬಂಧಿಸಬಹುದೆಂಬ ಆತಂಕದಲ್ಲಿದ್ದಾರೆ.ಈ ಸಂಬಂಧ ಪೊಲೀಸರು 250 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, 49 ಮಂದಿಗೆ ಮಾತ್ರ ಜಾಮೀನು ಸಿಕ್ಕಿದೆ. ಯಾವುದೇ ತೊಂದರೆ ಆಗದಂತೆ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಮೂಲ ಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಿದವರು ಇದೀಗ ಮೌನಕ್ಕೆ ಶರಣಾಗಿದ್ದು, ತಮ್ಮನ್ನು ತಮ್ಮ ಪಾಡಿಗೆ ಬಿಡುವಂತೆ ಸಂದರ್ಶಕರಿಗೆ ಮನವಿ ಮಾಡಿದ್ದಾರೆ. 'ನಾವು ಅದನ್ನು ಸರ್ಕಾರಕ್ಕೆ ಬಿಟ್ಟಿದ್ದೇವೆ. ಅವರ ಮನಸ್ಸಿಗೆ ಬಂದರೆ ನಮಗೆ ಮೂಲ ಸೌಕರ್ಯ ಕಲ್ಪಿಸಲಿ' ಎಂದು ಪುಟ್ಟತಮ್ಮಡಾಯಿ ಬೇಸರ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ ಮಾತನಾಡಿ, ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡಿದರೂ ಅಧಿಕಾರಿಗಳು ಮತ್ತು ಸರ್ಕಾರ ನಮ್ಮ ಬೇಡಿಕೆಯನ್ನು ಕೇಳಿಲ್ಲ. ಗ್ರಾಮಸ್ಥರು ಅರಣ್ಯದೊಳಗಿನ ಕೊಳಗಳು ಮತ್ತು ಮಾನವ ನಿರ್ಮಿತ ಹೊಂಡಗಳಿಂದ ಸಂಗ್ರಹಿಸಿದ ಕುಡಿಯುವ ನೀರನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.ಸ್ಥಳೀಯ ಆರಾಧ್ಯ ದೈವ ಮಹದೇಶ್ವರ ದೇವರಿಗೆ ಪೂಜೆ ಸಲ್ಲಿಸುವವರ ಮೇಲೂ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ಪೂಜೆ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಹಿಂಸಾಚಾರವು ಇಂಡಿಗನತ್ತ ಮತ್ತು ನೆರೆಯ ಮಂದಾರ ನಿವಾಸಿಗಳನ್ನು ವಿಭಜಿಸಿದೆ. ಮಂದಾರ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಈಗ ಅವರು ಸಾಕಷ್ಟು ಸಂಖ್ಯೆಯ ಸೋಲಿಗರು ವಾಸಿಸುತ್ತಿರುವ ಪಾಲಾರ್ ನಿವಾಸಿಗಳನ್ನು ಸಂಪರ್ಕಿಸಿದ್ದಾರೆ. ಭದ್ರತೆಗಾಗಿ ಮತ್ತು ಇಂಡಿಗನತ್ತ ಜನರೊಂದಿಗೆ ಯಾವುದೇ ಘರ್ಷಣೆಯನ್ನು ತಪ್ಪಿಸಲು ಅಲ್ಲಿಗೆ ತೆರಳುತ್ತಿದ್ದಾರೆ.ಪೋಷಕರ ಹಿಂಸಾಚಾರ ಮತ್ತು ಬಂಧನವು ಮಕ್ಕಳ ಮೇಲೆ ಮಾನಸಿಕ ಪ್ರಭಾವವನ್ನು ಬೀರಿದೆ. ಅವರು ಈಗ ತಮ್ಮ ತಾತ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಗ್ರಾಮದ ಬಹುಪಾಲು ವಯಸ್ಕರು ಜೈಲು ಪಾಲಾಗಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ನೀಡುವ ಆಹಾರವನ್ನು ಅವಲಂಬಿಸಿದ್ದಾರೆ. ಹಿಂಸಾಚಾರ ಅಥವಾ ಅವರ ಹೆತ್ತವರ ಬಗ್ಗೆ ಕೇಳಿದಾಗ ಮಕ್ಕಳು ಅದರಿಂದ ದೂರ ಉಳಿಯುತ್ತಿದ್ದಾರೆ.ಶಾಲೆಯ ಬಳಿ ಪೊಲೀಸರ ಉಪಸ್ಥಿತಿಯು ಅವರನ್ನು ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ ಮತ್ತು ಅವರ ಪೋಷಕರನ್ನು ಮತ್ತೆ ಕರೆದುಕೊಂಡು ಹೋಗುತ್ತಾರೆ ಎಂಬ ಭೀತಿ ಮನೆಮಾಡಿದೆ. ಮಂದಾರದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿದ್ದು, ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರದಿಂದ ಊಟ ಹಾಕಿಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿಲ್ಲ.